ಶ್ರೀ ಪರಶುರಾಮ ಜಿ. ಸೂರನಗದ್ದೆ ಇವರು ರಚಿಸಿ, ನಿರ್ದೇಶಿಸಿ, ಪ್ರಸ್ತುತ ಪಡಿಸುತ್ತಿರುವ ಸಾಮಾಜಿಕ ನಾಟಕ 'ಅತ್ತೆಗೊಂದು ಕಾಲ ಸೊಸೆಗೊಂದು ಕಾಲ'. ಈ ನಾಟಕ ಈಗಾಗಲೇ ೧೦೦ ಕ್ಕೂ ಹೆಚ್ಚು ಪ್ರದರ್ಶನ ಕಂಡಿದೆ. ಗ್ರಾಮೀಣ ಪ್ರದೇಶದ ಅದರಲ್ಲೂ ಮಲೆನಾಡಿನ ದೀವರ ಜನಾಂಗದ ಕೌಟುಂಬಿಕ ಜೀವನ ಕ್ರಮ, ಜಗಳ, ಮುನಿಸು, ಸಂತೋಷ, ದುಃಖ, ದುಮ್ಮಾನ ಎಲ್ಲವನ್ನೂ ಪಾತ್ರಗಳು ಅವರದೇ ಆಡು ಭಾಷೆಯಲ್ಲಿ ವ್ಯಕ್ತಗೊಳಿಸುವುದು ಈ ನಾಟಕದ ಹೆಗ್ಗಳಿಕೆ. ಭಾಷೆ ಈ ನಾಟಕದ ದೈತ್ಯ ಶಕ್ತಿ. ನಗರೀಕರಣ ಮತ್ತು ಪಾಶ್ಚತ್ತೀಕರಣದ ಪರಿಣಾಮವಾಗಿ ಕಣ್ಮರೆಯಾಗುತ್ತಿರುವ ಗ್ರಾಮ್ಯ ಭಾಷೆಯ ಸೊಗಡನ್ನು ಅದರ ಪದ ಸಂಪತ್ತನ್ನು ನಿರ್ದೇಶಕರು ಈ ನಾಟಕದ ರೂಪದಲ್ಲಿ ಉಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಾಟಕದ ಪ್ರದರ್ಶನದುದ್ದಕ್ಕೂ ಭಾಷೆಗೆ ತಕ್ಕುದಾದ ಭೈರಕ್ಕನ ಪಾತ್ರದಾರಿ ನಾಗರಾಜ್ ಹಾಗೂ ಸಹ ಕಲಾವಿದರ ಅಭಿನಯ ಮನಸೂರೆಗೊಳ್ಳುತ್ತದೆ.
ಮಲೆನಾಡಿನ ದೀವರ ಸಾಮಾಜಿಕ ಬದುಕಿನಲ್ಲಿ ಕಷ್ಟ, ನಷ್ಟ, ರೋಗ, ರುಜಿನಗಳ ಪರಿಹಾರಕ್ಕಾಗಿ ಅಥವಾ ಕಳೆದುಕೊಂಡ ವಸ್ತ್ರ, ಒಡವೆ, ಜನ ಜಾನುವಾರಗಳ ಹುಡುಕಾಟಕ್ಕಾಗಿ ಅಥವಾ ಇನ್ನಾವುದೋ ಸಂಕಷ್ಟದ ಪರಿಹಾರಕ್ಕಾಗಿ 'ಗಾಡಿಗ' ಎಂಬ ಮಾಂತ್ರಿಕನನ್ನು ಆಶ್ರಯಿಸುತ್ತಿದ್ದರು. ಈ ಗಾಡಿಗರು ಮೈ ಮೇಲೆ ದೇವರ ಆವಾಹಿಸಿ ಜನರ ಕಷ್ಟ ಕಾರ್ಪಣ್ಯಕ್ಕೆ ಕಾರಣವನ್ನೂ ಪರಿಹಾರವನ್ನೂ ಸೂಚಿಸುತ್ತಿದ್ದರು. ಬದಲಾದ ಜೀವನ ಶೈಲಿಯಲ್ಲಿ ಈ ಗಾಡಿಗ ಪರಂಪರೆ ಕಣ್ಮರೆಯಾಗಿದೆ. ಇಂತಹ ಗಾಡಿಗನೊಬ್ಬ ಕೌಟುಂಬಿಕ ಸಮಸ್ಯೆಯನ್ನು ಪರಿಹರಿಸುವ ಪರಿಯ ಯಥಾವತ್ತು ದರ್ಶನ ನಾಟಕದ ಈ ದೃಶ್ಯದಲ್ಲಿ ಅದ್ಭುತವಾಗಿ ಮೂಡಿದೆ.
Ещё видео!